ರೆವಿನ್ಯೂ ಸೈಟ್ ಅಂದ್ರೇನು, ಇದನ್ನು ಖರೀದಿಸಬಹುದಾ???

ಜಮೀನನ್ನು ಮಾರುವುದು, ಖರೀದಿಸುವುದು ಸರ್ವೇಸಾಮಾನ್ಯವಾಗಿದೆ. ಜಮೀನಿನ ಮಾರಾಟದಲ್ಲಿ ಹೆಚ್ಚಿನ ಅವ್ಯವಹಾರಗಳು ನಡೆಯುವುದರಿಂದ ಜಮೀನನ್ನು ಖರೀದಿಸುವಾಗ ಜಾಗೃತರಾಗಿರಬೇಕು. ಅದೇ ರೀತಿ ರೆವಿನ್ಯೂ ಸೈಟ್ ಮೇಲೆ ಹೆಚ್ಚು ಜನರು ಬಂಡವಾಳ ಹಾಕುತ್ತಾರೆ ಆದರೆ ರೆವಿನ್ಯೂ ಸೈಟ್ ಎಂದರೇನು, ರೆವಿನ್ಯೂ ಸೈಟ್ ಖರೀದಿಸುವಾಗ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಅದರ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ.

ಭೂಮಿಯಲ್ಲಿ ಕೃಷಿ ಮಾಡುತ್ತಿದ್ದು ನಂತರ ಕೃಷಿಯೇತರ ಉದ್ದೇಶಕ್ಕೆ ಅಂದರೆ ವಸತಿ ಉದ್ದೇಶಕ್ಕಾಗಿ, ಕೈಗಾರಿಕಾ ಉದ್ದೇಶಕ್ಕಾಗಿ ಸರ್ಕಾರದಿಂದ ಅನುಮತಿ ಪಡೆದು ಕನ್ವರ್ಟ್ ಮಾಡಿಕೊಳ್ಳದಿದ್ದರೆ ಆ ಜಮೀನಿನಲ್ಲಿ ಕೃಷಿಯೇತರ ಉದ್ದೇಶಗಳನ್ನು ನಡೆಸಲು ಬರುವುದಿಲ್ಲ. ಅಂತಹ ಜಮೀನಿನಲ್ಲಿ ಸೈಟ್ ಮಾಡಿ ಅದನ್ನು ರೆವಿನ್ಯೂ ಸೈಟ್ ಎಂದು ಕರೆಯುತ್ತಾರೆ. ಕರ್ನಾಟಕದಲ್ಲಿ ಬಿಎಂಆರ್ ಡಿ ಅವರು, ಟೌನ್ ಪ್ಲಾನಿಂಗ್ ಅಥಾರಿಟಿ ಅಪ್ರೂವಲ್ ಮಾಡಬಹುದು. ಇಂತಹ ಸೈಟ್ ಗಳಿಗೆ ಮೂಲಭೂತ ಸೌಕರ್ಯಗಳು, ರಸ್ತೆ, ಇನ್ನಿತರ ಸೌಲಭ್ಯಗಳು ಸರಿಯಾಗಿ ಇರುವುದಿಲ್ಲ. ರೆವಿನ್ಯೂ ಸೈಟ್ ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ರೆವಿನ್ಯೂ ಸೈಟ್ ಅನ್ನು ಹೆಚ್ಚು ಜನ ಕೊಂಡುಕೊಳ್ಳುತ್ತಾರೆ ಬಂಡವಾಳ ಹಾಕುತ್ತಾರೆ.

ಈ ಸೈಟ್ ಗೆ ಪಂಚಾಯತಿಯಿಂದ ಫಾರ್ಮ್ ನಂಬರ್ ಒಂಬತ್ತು, ಫಾರ್ಮ್ ನಂಬರ್ 11 ತುಂಬಿಸುತ್ತಾರೆ ಆದರೆ ಇದರಲ್ಲಿ ಮೋಸದ ವ್ಯವಹಾರ ನಡೆದಿರುವುದರಿಂದ ಇತ್ತೀಚೆಗೆ ಇ-ಸ್ವತ್ತು ಜಾರಿಗೆ ತರಲಾಗಿದೆ. ಪಂಚಾಯತಿ ತನ್ನ ವ್ಯಾಪ್ತಿಯಲ್ಲಿ ಬರುವ ಜಾಗಗಳಿಗೆ ಮಾತ್ರ ಅನುಮತಿ ಕೊಟ್ಟಿರುತ್ತದೆ. ಪಂಚಾಯತ್ ವ್ಯಾಪ್ತಿಯಿಂದ ಹೊರಗಿರುವ ರೆವಿನ್ಯೂ ಸೈಟ್ ಗೆ ಹೆಚ್ಚಿನ ಕಾಗದಪತ್ರಗಳು ಇರುವುದಿಲ್ಲ.

ರೆವಿನ್ಯೂ ಸೈಟ್ ಅನ್ನು ಖರೀದಿಸಿದರೆ ಕೆಲವು ಸಮಸ್ಯೆಗಳು ಉಂಟಾಗುತ್ತದೆ ಮತ್ತು ಅದನ್ನು ಇನ್ನೊಬ್ಬರಿಗೆ ಮಾರಬೇಕಾದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಸೈಟ್ ರಿಜಿಸ್ಟರ್ ಮಾಡುವುದನ್ನು ನಿಲ್ಲಿಸುತ್ತಾರೆ. ಕೆಲವು ಬ್ಯಾಂಕ್ ಗಳಿಂದ ಮಾತ್ರ ರೆವಿನ್ಯೂ ಸೈಟ್ ಗೆ ಸಾಲ ಕೊಡುತ್ತಾರೆ. ಕಾನೂನುಬದ್ಧವಾಗಿ ಜಾಗವನ್ನು ಕನ್ವರ್ಟ್ ಮಾಡದೆ ಇರುವುದರಿಂದ ಸರ್ಕಾರ ಯಾವ ಸಮಯದಲ್ಲಿ ಬೇಕಾದರೂ ತನ್ನ ಸ್ವಾಧೀನಕ್ಕೆ ಒಳಪಡಿಸಿಕೊಳ್ಳಬಹುದು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮೀಸಲಿಟ್ಟ ಭೂಮಿಯನ್ನು ರೆವಿನ್ಯೂ ಸೈಟ್ ಮಾಡಿಕೊಂಡು ಮಾರಿದಾಗ ಸಮಸ್ಯೆ ಉಂಟಾಗುತ್ತದೆ. ರೆವಿನ್ಯೂ ಸೈಟ್ ಖರೀದಿಸುವವರಿಗೆ ತಮ್ಮ ಆಸ್ತಿಯ ಬಗ್ಗೆ ಯಾವುದೆ ವ್ಯಾಲಿಡ್ ಟೈಟಲ್ ಇರುವುದಿಲ್ಲ. ಕರ್ನಾಟಕ ಸರ್ಕಾರವು ಕೆಲವೊಮ್ಮೆ ಊರುಗಳು ಬೆಳೆದಂತೆ ಅಕ್ರಮ-ಸಕ್ರಮ ಮೂಲಕ ರೆವಿನ್ಯೂ ಸೈಟ್ ಗಳನ್ನು ಕಾನೂನುಬದ್ಧವಾಗಿ ಮಾಡುತ್ತದೆ ಆಗ ಹಣ ಕಟ್ಟಬೇಕಾಗುತ್ತದೆ.

ಕೆಲವು ಸಂದರ್ಭದಲ್ಲಿ ರೆವಿನ್ಯೂ ಸೈಟ್ ಗಳನ್ನು ಅಕ್ರಮ-ಸಕ್ರಮ ಮೂಲಕವೂ ಕಾನೂನು ಬದ್ಧಗೊಳಿಸಲು ಆಗುವುದಿಲ್ಲ. ನದಿಯ ತೀರದಲ್ಲಿರುವ ರೆವಿನ್ಯೂ ಸೈಟ್ ಗಳನ್ನು ಕಾನೂನು ಬದ್ಧಗೊಳಿಸಲು ಆಗುವುದಿಲ್ಲ. ಹೈಟೆನ್ಶನ್ ತಂತಿಗಳು ಸೈಟ್ ಮೇಲೆ ಹಾದು ಹೋಗಿದ್ದರೆ ಅಂತಹ ಸೈಟ್ ಗಳನ್ನು ಸಕ್ರಮಗೊಳಿಸಲು ಆಗುವುದಿಲ್ಲ. ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ರೆವಿನ್ಯೂ ಸೈಟ್ ಮಾಡಿಕೊಂಡಿದ್ದರೆ ಅಂತಹ ಸೈಟ್ ಗಳನ್ನು ಸಕ್ರಮ ಮಾಡಲು ಬರುವುದಿಲ್ಲ. ಹಿಂದಿನ ವರ್ಷ ರೆವಿನ್ಯೂ ಸೈಟ್ ರಿಜಿಸ್ಟ್ರೇಷನ್ ನಿಲ್ಲಿಸಿರುವುದರಿಂದ ಲಕ್ಷಾಂತರ ರೆವಿನ್ಯೂ ಸೈಟ್ ಮಾಲೀಕರು ಸಮಸ್ಯೆ ಅನುಭವಿಸಿದರು.

ರೆವಿನ್ಯೂ ಸೈಟ್ ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಎಂಬ ಕಾರಣಕ್ಕೆ ಅಂತಹ ಸೈಟ್ ಮೇಲೆ ಬಂಡವಾಳ ಹಾಕುವುದರಿಂದ ಹೆಚ್ಚಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಈ ಸೈಟ್ ಗೆ ಯಾವುದೆ ರೀತಿಯ ಕಾನೂನಾತ್ಮಕವಾಗಿ ಆಧಾರವಿರುವುದಿಲ್ಲ ಆದ್ದರಿಂದ ರೆವಿನ್ಯೂ ಸೈಟ್ ಖರೀದಿಸಬೇಕಾದರೆ ಹೆಚ್ಚು ಯೋಚನೆ ಮಾಡಬೇಕಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ರೆವಿನ್ಯೂ ಸೈಟ್ ಖರೀದಿಸುವಾಗ ಜಾಗೃತರಾಗಿರಿ.

Join The Discussion

Compare listings

Compare